ಬಾಲಗಂಗಾಧರ ತಿಲಕ್, ದೇವರಕೊಂಡ
1921-66. ತೆಲುಗು ಕವಿ, ತೆಲುಗು ಕಾವ್ಯ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆ ಅಮೂಲ್ಯವಾದುದು. ಮಧುರವಾದ ಶೈಲಿ, ಮಾನವೀಯ ಮೌಲ್ಯಗಳು ತಿಲಕ್ ಕಾವ್ಯದ ಮುಖ್ಯ ಲಕ್ಷಣಗಳು. ಅಮೃತಂಕುರಿಸಿನ ರಾತ್ರಿ ಎಂಬ ಅವರ ಕಾವ್ಯ ಸಂಕಲನಕ್ಕೆ 1971ರ ಕೇಂದ್ರ ಸಾಹಿತ್ಯ ಅಕಾಡಮಿ ಬಹುಮಾನ ಲಭಿಸಿತು. ತಿಲಕರ ನಿಧನಾನಂತರ ಪ್ರಕಟವಾಯಿತು (1968). ಈ ಸಂಕಲನದ ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ, ಒಂದು ಗ್ರಂಥವಾಗಿ ಹೊರಬರುವ ಮೊದಲೇ ಕವಿಗೆ ಖ್ಯಾತಿಯನ್ನು ತಂದುಕೊಟ್ಟವು.
ಆಧುನಿಕ ತೆಲುಗು ಕಾವ್ಯದಲ್ಲಿ ವಚನಕವಿತ ಎಂಬ ಹೆಸರಿನ ಗದ್ಯಕಾವ್ಯ ಪಂಥಕ್ಕೆ ಇವರು ನೀಡಿದ ಕೊಡುಗೆ ಸ್ಮರಣಾರ್ಹವಾದುದು. ಗದ್ಯಕಾವ್ಯಕ್ಕೆ ನಿರ್ದಿಷ್ಟರೂಪ, ಶೈಲಿ ನೀಡಿದರು. ಆಧುನಿಕ ತೆಲುಗು ಕಾವ್ಯದ ಎರಡು ಮುಖ್ಯಪಂಥಗಳಾದ ಭಾವಕಾವ್ಯ ಅಥವಾ ರಮ್ಯಕಾವ್ಯ ಮತ್ತು ಪ್ರಗತಿ ಶೀಲ ಕಾವ್ಯಗಳ ಸಮ್ಮಿಲನವನ್ನು ತಿಲಕ್ ಕಾವ್ಯದಲ್ಲಿ ಕಾಣುತ್ತೇವೆ.

ಕೆಲವು ಖಂಡಕಾವ್ಯಗಳನ್ನೂ ರಚಿಸಿದ್ದಾರೆ. ಸೀತ, ಅದ್ವೈತಮಾನ್ಮತಮು, ಆಟವೆಲದಿ ಮುಂತಾದವು ರಮಣೀಯ ಭಾವಚಿತ್ರಗಳನ್ನು ಕಣ್ಣಿಗೆ ಕಟ್ಟಿದಂತೆ ಪ್ರದರ್ಶಿಸುತ್ತವೆ. ಗೋರುವಂಕಲು ಎಂಬ ಹೆಸರಿನ ಖಂಡಕಾವ್ಯ ಸಂಕಲನ ಇನ್ನೂ ಪ್ರಕಟವಾಗಬೇಕಾಗಿದೆ. ಇತ್ತೀಚೆಗೆ ಬಾಲಗಂಗಾಧರ ತಿಲಕ್‍ರ ಕಥಾ ಸಂಕಲನವೊಂದು ಪ್ರಕಟವಾಗಿದೆ. ಸಣ್ಣಕತೆಯನ್ನೂ ಕಾವ್ಯದಂತೆ ಬರೆಯುವ ಶೈಲಿ ಇವರದು.
ತಿಲಕ್ ಮೂಲಭೂತವಾಗಿ ಮಾನವೀಯ ಕವಿ. ಅವರ ಪ್ರಾರ್ಥನ, ದೀಪಂ, ಶಿಕ್ಷಾಪತ್ರಂ, ಆರ್ತಗೀತಂ ಮುಂತಾದ ಕವನಗಳು ಇತ್ತೀಚಿನ ಕವಿಗಳ ಮೇಲೆ ಅಪಾರ ಪ್ರಭಾವ ಬೀರಿವೆ. ಬಹಳ ಕಾಲದ ತನಕ ಮನಸ್ಸಿನಲ್ಲಿ ಹಸಿರಾಗಿ ಉಳಿಯುವ ಉತ್ತಮ ಕವನಗಳನ್ನು ಬರೆದರೆಂದು ಇವರು ಹೆಸರು ಪಡೆದಿದ್ದಾರೆ.							(ಆರ್.ವಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ